ಅನುಕೂಲಕ್ಕೊಂದೆರಡು ಪ್ರೀತಿ...!

ಮೊನ್ನೆ ಯಾವ್ದೊ ಕೆಲ್ಸದ ಮೇಲೆ ಬೆಂಗಳೂರಿಗೆ ಹೊಗ್ಬೆಕಾಗಿ ಬಂತು. ನನ್ಗೆ ಬೆಂಗ್ಳೂರಂದ್ರೆ ಒಂತರ ಬೇಜಾರು ಅಲ್ಲಿಯ ಹೊಗೆ, ಜನ ಸಂದಣಿ, ಟ್ರಾಫಿಕ್ ನೋಡಿದ್ರೆ ಅಲ್ಲಿಗ್ಯಾಕಾರು ಹೋಗ್ಬೇಕಪ್ಪ ಅನ್ಸೋದು ಒಂದ್ ಕಡೆಯಾದ್ರೆ, ಹಾಸನ ಬಿಟ್ಟು ಹೋಗೊದಂದ್ರೆ ಒಂತರ ಅನಾಥ ಭಾವ.
ಮೊದ್ಲಿಂದ್ಲು ನಂಗೆ ಪ್ರಯಾಣ ಅಷ್ಟಕ್ಕಷ್ಟೇ. ಮನಸ್ಸಿಗೆ ಬೇಜಾರಾದಾಗ ಪ್ರಯಾಣ ಮಾಡಿದ್ರೆ ಸ್ವಲ್ಪ ನೆಮ್ದಿ ಸಿಗುತ್ತೆ ಅಂತ ಎಲ್ಲ ಹೇಳ್ತಾರೆ, ಆದ್ರೆ "ನನ್ನೂರಿನ, ನನ್ನ ಮನೆಯ, ನನ್ನ ಕೋಣೆಯ,ನನ್ನ ಹಾಸಿಕೆಯ ಮೂಲೆಯಲ್ಲಿ ಸಿಗದ ನೆಮ್ದೀ ಬೇರೆಲ್ಲೋ ಎಲ್ ಸಿಗುತ್ತೆ ಅನ್ನೊ ವಾದ ನನ್ದೂ...."
ಅದ್ ಬಿಡಿ, ಅಂತು ಇಂತು ಎರಡ್ ದಿನಕ್ ಬೇಕಾದ ಬಟ್ಟೆ ಬರೆ ಜೋಡಿಸಿ, ಕೆಲಸಕ್ಕೆ ಬೇಕಾದ ಫೈಲ್ ಗಳನ್ನ ಎತ್ತಿಟ್ ಕೊಂಡು, ಬೆಳಗ್ಗೆ ಬೇಗ ಏಳಲು ಸಿದ್ಧವಾಗಿ ನಿದ್ದೆಗೆ ಜಾರಿದೆ. ಅದ್ಯಂತ ಫೋನಲ್ಲಿ ಅಲರಾಮ್ ಇಟ್ರು ನಂಗ್ ಅಪ್ಪ ಕೂಗೋ ಕೂಗಿಗೆ ಎಚ್ರ ಆಗದು.

ಅಪ್ಪ: ಪುಟ್ಟು ನೋಡು ಈಗಾಗ್ಲೇ 5:15, 5:30 ಕ್ಕೆ ಬಸ್ಸು, ಸುಮ್ನೇ ಕೆಂಪ್ ಬಸ್ಸಲ್ ಹೋಗಕ್ ಆಗ್ದೇ ಐರಾವತ‌ ಬೇರೆ ಬುಕ್ ಮಾಡಿದ್ಯಾ... ನೋಡೀಗ ಅದ್ ಹೋಗುತ್ತೆ....

ನಾನು: ಆ........ ಇಷ್ಟ್ ಬೇಗ 5:15 ನಾ.... ಅಲಾರಾಮ್ ಹೊಡ್ದಿದ್ದೇ ಕೇಳಿಸ್ಲಿಲ್ಲಾ...... (ಪಕ್ಕದಲ್ಲಿದ್ದ ಫೋನ್ ತಗಂಡ್ ನೋಡಿದ್ರೆ ಇನ್ನು 4:15)
ಅಪ್ಪ ಯಾಕ್ ಇಷ್ಟ್ ಬೇಗ ಎಬ್ರುಸ್ದೇ...... ಹೇ...... ಆ...... ನಿಂದೊಂದ್ ಕಾಟ.....

ಅಪ್ಪ: ಬೇಗ ಎದ್ದು ರೆಡಿ ಆಗು.... ಐರಾವತ ಹೋಗುತ್ತೆ ಆಮೇಲೆ..... 500 ರೂ ಸುಮ್ನೇ waste ಆಗುತ್ತೆ.....
ಎಲ್ಲ ಮಿಡಲ್ ಕ್ಸಾಸ್ ಅಪ್ಪನ್ ತರ ನಮ್ ಅಪ್ಪನ್ ಹರಿಕತೆ ಶುರು.....
ಅಂತು ಇಂತು ಸ್ನಾನ ಪೂಜೆ ಮಾಡಿ ಅಪ್ಪ ಕಾಯಿಸ್ಕೊಟ್ಟ ಹಾಲ್ ಕುಡ್ದೂ.... ಬಸ್ ಸ್ಟಾಂಡಿಗೆ ಅಪ್ಪನ ಹಳೇ ಬಜಾಜ್ ಚೇತಕ್ ನಲ್ಲಿ ನಾನು ಅಪ್ಪ ಬಂದ್ ಇಳಿದ್ವೀ. ಆ ಸ್ಕೂಟರ್ ಗೆ ನಂಗಿಂತ ಜಾಸ್ತಿ ವಯಸ್ಸಾಗಿದೆ ಮತ್ತೆ ನನ್ಗಿಂತ ನನ್ನಪ್ಪನಿಗೆ ಅದನ್ನ ಕಂಡ್ರೇ ಪ್ರೀತಿ.

ಐರಾವತ ಹೊರಟು ರೆಡಿ ಇತ್ತು....
ಅಪ್ಪ: (ಏನೋ ಯುದ್ಧಕ್ಕೆ ಕಳ್ಸೊರಂತೆ) ಪುಟ್ಟು ಹಂಗ್ ಹತ್ತು, ಟಿಕೆಟ್ ನಲ್ಲಿ ಇರೋ ಸೀಟ್ ನಲ್ಲೇ ಕೂರು, ಗೊತ್ತಾಗ್ಲಿಲ್ಲಾಂದ್ರೆ ಕಂಡಕ್ಟರ್ ನ ಕೇಳು, ಬ್ಯಾಗ್ ಹುಷಾರು, ಮಧ್ಯಾ ಇಳಿಯಕ್ ಹೋಗ್ಬೇಡ, ಯಾರಾದ್ರು ಚಾಕಲೇಟ್ ಕೊಡ್ತೀನಿ ಅಂದ್ರೆ ಹೋಗ್ಬೇಡ. ಹೀಗೆ ಸುಮಾರ್ ಟಿಪ್ಸ ಕೊಟ್ಟು ನನ್ನ ಬಸ್ ಹತ್ಸಿ, ಬಸ್ಸು ಮರೆಯಾಗೋವರ್ಗು ಅಲ್ಲೇ ಇದ್ದು, ಮರೆಯಾದ್ಮೇಲೆ ಫೋನ್ ಮಾಡಿ. ಪುಟ್ಟು ಎಲ್ಲಾ ಸರಿ ಇದ್ಯ ಅಂತ ಕೇಳಿ ಮನೆಗೆ ಹೊರಡೋದು....
We can't help father's.... They are the only person who really care about us....

ಐರಾವತದಲ್ಲಿ ಕಿಟಕಿ ಸೀಟು,ಹೊರಗೆ ಮಂಜು, ಕಿವಿಗೆ ಇಯರ್ ಫೋನ್ ಇದ್ರೆ ಸಾಕು,ಸ್ವರ್ಗಾ!!
ಹೀಗಿದ್ದಾಗ ಪಕ್ಕದಲ್ಲಿ ಯಾರೋ excuse me ನನ್ ಫೋನ್ ಸ್ವಲ್ಪ charge ಗೆ ಹೊಕ್ತೀರ???
ಸುಮಾರು ನನ್ನಷ್ಟೇ ಅಥವಾ ಒಂದೆರ್ಡು ವರ್ಷ ಹೆಚ್ಚು ಕಡ್ಮೇ ಇದ್ದಂತ ಹುಡ್ಗೀ, ನೋಡೋಕೆ ಶಾಪಗ್ರಸ್ಥ ಅಪ್ಸರೆಯಂತಿದ್ಲು. ನಾನು ಚಾರ್ಜರ್ ಇಸ್ಕೊಂಡು ಚಾರ್ಜಿಗೆ ಹಾಕ್ದೇ.

ಫೋನನ್ನ ಚಾರ್ಜಿಗೆ ಹಾಕಿದ್ದೇ ತಡ ಆಕೆ ಅದ್ಯಾರಿಗೂ ಮೆಸೇಜ್ ಮಾಡಲು ಶುರು ಮಾಡಿದ್ಲು. ಯಾರಾದ್ರು ಪಕ್ಕ ಕೂತು ಮೆಸೇಜ್ ಮಾಡ್ತಿದಾರೆ ಅಂದ್ರೆ ಇಣುಕೊದು ಸ್ವಾಭಾವಿಕ ,ಅವ್ರು ಗೊತ್ತಿರ್ಲಿ ಬಿಡ್ಲಿ ನಮ್ಮ ಹತೋಟಿ ಮೀರಿ ನಮ್ ಕಣ್ಣು ಇಣ್ಕುತ್ತೆ.
ಅದ್ರಲ್ಲಿ ನನ್ಗೆ ಕಂಡದ್ದು " I choose my family over you" sorry!!
ಅದನ್ನ ತುಂಬ ಸತಿ ಅಳಿಸಿ ಅದೇನೇನೋ ಬರ್ದು, ಕೊನೆಗೆ ಶತಾಯ ಗತಾಯ ಬಹಳ ಕಷ್ಟ ಪಟ್ಟು ಒಂದೇ ಸಾಲನ್ನ ಬರ್ದು ಪರಮ ಹಿಂಸೆಯಿಂದ ಅದ್ಯಾರಿಗೊ ಕಳ್ಸಿದ್ಲು. ಅಷ್ಟಾದ್ ಮೇಲೆ ಒಂದ್ ಅರ್ಧ ಬಾಟಲಿ ನೀರ್ ಕುಡ್ದೂ ಮೊಬೈಲನ್ನ ಪಕ್ಕಕ್ಕೆ ಎಸೆದು ಹಿಂದಕ್ಕೆ ಒರಗಿ ಕಣ್ ಮುಚ್ಚಿದ್ಲು.‌ ಕೈ ನೆಡುಗ್ತಿತ್ತು, ತುಟಿ ಬಿಗಿತಿತ್ತು, ಕಣ್ಣಂಚಲ್ಲಿ ನೀರಿತ್ತು. ಬೆಳಗಿನ ಜಾವವೇ ಇಬ್ಬರ ಹೃದಯ ಮುರಿದಿತ್ತು. ಇನ್ಯಾರದ್ದೂ ಅಹಂ ಮೆರೀತಿತ್ತು...!!

ಆಕೆ ಪರಿಸ್ಥಿತಿ ಬಹಳ ಹೋತ್ತು ನೋಡಲಾಗ್ಲಿಲ್ಲಾ. ಆದ್ರೆ ಯಾರಾದ್ರು ದು:ಖದಲ್ಲಿದ್ರೆ ಅವ್ರನ್ನ ಒಂದಷ್ಟು ಹೊತ್ತು ಅವ್ರ ಪಾಡಿಗೆ ಬಿಡ್ಬೇಕು, ನಮ್ಮ ಕೆಟ್ಟ ಕುತೂಹಲಕ್ಕೆ ಅವ್ರನ್ನ ಆಹಾರ ಮಾಡ್ಕೊಬಾರ್‍ದು. "ಅಯ್ಯೋ ಪಾಪ" ಅನ್ನೋದು ಸಾಂತ್ವನ ಅಲ್ಲ ಅದೊಂದು ಶಾಪ..! 

ಬಸ್ನಲ್ಲಿ ಪ್ರಯಾಣ ಮಾಡ್ತಿರೊ ಎಲ್ಲರಿಗೂ ಒಂದಲ್ಲ ಒಂದು ದು:ಖವಿದೆ. ಕೆಲವರಿಗೆ ಇನ್ನು ಹಸಿಯಾಗಿದ್ದರೆ ಇನ್ನು ಕೆಲವರಿಗೆ ಮಡುಗಟ್ಟಿ ಹೋಗಿರತ್ತೆ. ಇದ್ಯಾವುದರ ಪರಿವೇ ಇಲ್ಲದೇ ನಮ್ಮ ದೇಹಗಳ ಜೊತೆ ನಮ್ಮ ದು:ಖವನ್ನೂ ಹೊತ್ತು ಬಸ್ ಚನ್ನಾರಾಯಪಟ್ಟಣ ಬಿಟ್ಟಿತ್ತು. ನನ್ಗೇ ಬಸ್ ಹತ್ತಿದ್ ತಕ್ಷಣ ನಿದ್ದೆಗೆ ಜಾರಿ ಅಭ್ಯಾಸ, ಆದ್ರೆ ಇಂದ್ಯಾಕೊ ನಿದ್ದೆ ಹತ್ತಾನೆಯಿಲ್ಲ. ಅಷ್ಟರಲ್ಲಿ ನಮ್ಮಿಬ್ಬರ ಸೀಟಿನ ಸಂದಿಯಲ್ಲಿ ಸಿಕ್ಕಾಕೊಂಡ ಅವ್ಳ ಫೋನು ವೈಬ್ರೇಟ್ ಆಗ ತೊಡಗಿತ್ತು. ನನಗೆ ಯಾರೂ ಅಂತ ನೋಡೊ ಕುತೂಹಲ ಆದ್ರೆ ಹೇಗೆ ನೊಡೋದು? ಅದು ಆಕೆ ಫೋನು, ನಾನ್ ನೋಡ್ತಿರ್‍ಬೇಕಾದ್ರೆ ಆಕೆ ನನ್ನ ನೋಡಿದ್ರೆ !! ಮಾನ ಹೋಗುತ್ತೆ.... ಬೇಡ ಬೇಡ.... ಆಂತ ನನ್ನ ಕುತೂಹಲವನ್ನ ಅದುಮಿಟ್ಟೆ. 

ಕಾಲುಗಂಟೆ ಸತತವಾಗಿ ಆಕೆ ಫೊನ್ ವೈಬ್ರೇಟ್ ಆಯ್ತು ಆದ್ರೆ ಅದು ಗೊತ್ತಾದ್ರು ಆಕೆ ರಿಸೀವ್ ಮಾಡ್ಲಿಲ್ಲಾ, ಯಾಕೆ ?? ಯಾರಾದ್ರು ಆಕೆಗೆ ತೊಂದ್ರೆ ಕೊಡ್ತಿರ್‍ಬೋದಾ? ಅಥವಾ ಅದೇ ಯಾರಿಗೋ ಮೇಸೇಜ್ ಮಾಡಿದ್ಲಲ್ಲಾ ಆ ಹುಡ್ಗ ಏನಾದ್ರು ಕಾಲ್ ಮಾಡ್ತಿರ್‍ಬೋದಾ? ಅಥವಾ ಅಪ್ಪ ಅಮ್ಮ ಏನಾದ್ರು ಮಾಡ್ತಿದಾರ?? ನನ್ನ ತಲೆಯಲ್ಲಿ ಹತ್ತಾರು ಪ್ರಶ್ನೆ!! ಇಲ್ಲ ಇನ್ನು ನನ್ಗೇ ತಡಿಯಲಾಗ್ಲಿಲ್ಲಾ ಯಾರು ಇಷ್ಟೋಂದು ಫೋನ್ ಮಾಡ್ತಿರೋದು ಅಂತ ನೋಡ್ಲೇಬೇಕು, ಆದ್ರೇ ಹೆಂಗ್ ನೋಡದು?? ಅದಕ್ಕೊಂದು ಪ್ಲಾನ್ ಮಾಡ್ದೇ, ಕೈಯಲ್ಲಿದ್ದ ಬಾಟಲೀನ ಕೆಳಗೆ ಬೀಳ್ಸಿ ಯಾರು ಅಂತ ನೋಡಿದ್ರಾಯ್ತು ಅಂತ ನಿರ್ಧಾರ ಮಾಡಿ, ಗಾಬರಿಯಲ್ಲಿ ಬಾಟಲಿಯ ಬದಲು ಬಲಗೈಯಲ್ಲಿದ್ದ ನನ್ನ ಫೋನ್ ಬೀಳಿಸ್ದೇ, ಅಯ್ಯೋ ನನ್ನ ಫೋನ್...!!! ಈ ಫೋನ್ ಕೆಳಗೆ ಬಿದ್ದಾಗ ಆಗೋ ನೋವು ಬಹುಶ: ನಾವೇ ಸುಮಾರ್‍ ಜನರ ಮುಂದೆ ಬಿದ್ದಾಗ ಆಗೋ ನೋವಿಗಿಂತ ಹೆಚ್ಚು, ತಕ್ಷಣ ಫೋನ್ ಎತ್ತಿ ನೋಡಿದ್ರೆ ಮೊಬೈಲ್ ಸ್ಕ್ರೀನ್ ಮೇಲೆ ಎರಡು ಉದ್ದನೇ ಗೆರೆ "ಇದು ಗೋರಿಲ್ಲಾ ಗ್ಲಾಸು ಮೇಡಂ ಇದ್ರ ಮೇಲೆ ಕಾರ್‍ ಹೋದ್ರು ಏನಾಗಲ್ಲ ಅಂತ ೧೦೦ ತಗೋಂಡು ಸ್ಕ್ರೀನ್ ಗಾರ್‍ಡ್ ಹಾಕೋಟ್ಟ ಮೋಬೈಲ್ ಅಂಗಡಿ ಮಾದೇವನ ಮೇಲೆ ಅಪರಿಮಿತ ಕೋಪ ಬಂತು. ಹಾಗೆ ಇನ್ನೊಂದ್ ಎಡವಟ್ಟು ಬಿದ್ದ ಫೋನ್ ಎತ್ಕೊಳು ವ ತರಾತುರಿಯಲ್ಲಿ  ಆಕೆ ಫೋನ್ ಇಣುಕೋದನ್ನ ಮರೆತೇಬಿಟ್ಟಿದ್ದೇ!! ಈಗಂತು ನನ್ನ ಮೇಲೆ ನನಗೇ ಕೋಪ, ನನ್ನ ತಲೆ ನಾನೇ ಚಚ್ಕೊಂಡು ಸುಮ್ನಾದೆ. 

ಅಷ್ಟರಲ್ಲಿ ಬಸ್ ಬೆಳ್ಳೂರು ಬಿಟ್ಟು ಅದ್ಯಾವುದೊ ಒಂದು ಹೋಟಲ್ ನ ಕಡೆಗೆ ಸಾಗಿತ್ತೂ, ನೋಡಿ ಹತ್ ನಿಮಿಷ ಟೈಮಿದೆ ತಿಂಡಿ ತಿನ್ಕೊಳೋ ರು ತಿನ್ಕೊಳಿ ಅಂತ ಕಂಡಕ್ಟರ್‍ ಜೋರಾಗಿ ಕೂಗಿದ್ರೂ.  ನನ್ಗೇ ಮೊದಲಿಂದ್ಲೂ ಉದ್ದಿನ್ ವಡೆ ಅಂದ್ರೆ ತುಂಬಾ ಇಷ್ಟಾ ಅದರಲ್ಲೂ ಹೋಟಲಿನ "ಸಾಂಬಾರ್‍ ವಡೆ"!! ಕ್ರಿಸ್ಪಿ ಉದ್ದಿನ ವಡೆಗೆ, ಹದವಾಗಿ ಮಾಡಿದ ಕುದಿಯುವ ಸಾಂಬಾರು, ಅದರೊಟ್ಟಿಗೆ ಒಂದು ಸ್ಟಾಂಗ್ ಕಾಫಿ, ಇದು ನನ್ನ ಟ್ರಾವಲಿಂಗ್ ಮೆನೂ. ಆದರೆ ಆಕೇನ ದಾಟಿ ಹೇಗ್ ಹೋಗೋದು? ಎಚ್ಚರ ಮಾಡಿ ಅವ್ಳಿಗೆ ಎಮ್ಬ್ರಾಸ್ ಆದ್ರೇ? ಇವ್ಳಿಗೇನ್ ಸೆನ್ಸ್ ಇಲ್ವಾ ಅಂತ ಅನ್ಕೊಂಡ್ರೆ? ಯಾರದ್ದೋ ದು:ಖಕ್ಕಿಂತ ವಡೆಯ ಆಸೆ ಮುಖ್ಯವಾ? ಇವ್ಳೇನ್ ನಿದ್ದೆ ಮಾಡ್ತಿಲ್ಲ ಅವ್ಳೆ ಅರ್ಥ ಮಾಡ್ಕೊಂಡು ಜಾಗ ಬಿಡಕ್ಕೆ ಏನ್ ರೋಗ? ಅಷ್ಟು ಎಚ್ಚರವಿಲ್ದೇ ಬೇಜಾರಾಗಿದ್ದಾಳೆ ಅಂದ್ರೆ ಏನೋ ಗಂಭೀರ ಸಮಸ್ಯೆನೆ ಇರ್‍ಬೇಕು, ಇಲ್ಲಾಂದ್ರೆ ಮನುಷ್ಯನಿಗೆ ಇಷ್ಟಂತು ಪ್ರಜ್ಞೆ ಇರತ್ತೆ. ನಾನ್ ಅಲ್ಲಿರೋ ಜಾಗದಲ್ಲೇ ನುಸುಳಿಕೊಂಡ್ ಹೋಗ್ಲಾ? ಹೇ.. ಅಷ್ಟ್ರಲ್ಲಿ ನಾನೆಲ್ ಹಿಡಿಸ್ತೀನಿ, ಮಧ್ಯಾ ಸಿಕ್ಕಾಕೋಂಡ್ರೆ ಇನ್ನು ಮರ್‍ಯಾದೆ ಕೇಡು. ಇಷ್ಟೆಲ್ಲಾ ಯೋಚನೆ ಮಾಡೊ ಹೊತ್ತಿಗೆ ಡ್ರೈವರ್‍ ತನ್ನ ಸೀಟಿಗೆ ಬಂದಾಗಿತ್ತು ಅಲ್ಲಿಗೆ ನನ್ನ ವಡೆಯ ಆಸೆಗೆ ನೀರು. 

It's just a matter of excuse-me ಸ್ವಲ್ಪ ಜಾಗ ಬಿಡಿ ಅಂದಿದ್ರೆ ಆಗ್ತಿತ್ತು , ಮೊನ್ನೆ ಇನ್ನು ನನ್ನ ಸ್ನೇಹಿತನೊಬ್ಬ ನೀನ್ ತುಂಬ ಯೋಚನೆ ಮಾಡ್ತಿಯ ಕಣೇ, ಬದುಕಿಗೆ ಇಷ್ಟೊಂದ್ ಯೋಚನೆ ಬೇಡ ಅಂದಿದ್ದು ನೆನ್ಪಾಯ್ತು. ಹೌದು ಅಲ್ವಾ, ಬದುಕು ತುಂಬ ಸರಳ ಇಲ್ಲಿ ನನ್ಗೇನ್ ಬೇಕು ಅದನ್ನ ನಾವೇ ಕೇಳಿ ಪಡೀಬೇಕು, ಬೇರೆಯವ್ರೇ ಅರ್ಥ ಮಾಡ್ಕೊಂಡ್ಲಿ ಅಂತ ಕೂತ್ರೆ ಆಗಲ್ಲ. ಇಲ್ಲಾರಿಗೂ ಅರ್ಥ ಮಾಡ್ಕೊಬೇಕು ಅನ್ನೋ ಪ್ರಜ್ಞೆಯೇ ಇಲ್ಲ...... ನಾನು ಇನ್ನ ಇವ್ಳು ಏನಾದ್ರು ಮಾಡ್ಕೊಂಡ್ಲಿ ಅಂತ ಆಕೆ ಮೇಲೆ ಕೋಪ ಮಾಡ್ಕೊಂಡು ಕಣ್ ಮುಚ್ಚಿ ಅಂಗಾತ ಒರೆಗಿದೆ.  

ಒಂದ್ ಹತ್ ನಿಮಿಷ ಕಳ್ದಿರ ಬೇಕು ಆಗ ಯಾರೋ ನನ್ನ ಕೈ ಹಿಡಿದು ಅಲ್ಗಾಡಿಸ್ತಿರೊ ಅನುಭವ. ಥಟ್ ಅಂತ ಎದ್ದೇ.... 

ಆಕೆ: ಸ್ವಲ್ಪ ನೀರ್‍ ಕೊಡ್ತೀರ?

ನಾನು: ಆ....ಹು... ತಗೋಳಿ
ನೋಡಿ ನಮಗೆ ಏನ್ ಬೇಕೊ ಅದನ್ನ ಕೇಳಿ ತಗೋಬೇಕು the world is not ready to give.

ಆಕೆ: ಥ್ಯಾಂಕ್ಸ್.

ನಾನು: ವೆಲ್ ಕಮ್.
ಇದೇ ಸರಿಯಾದ ಸಮಯ ಅಂತ ನನ್ನ ಕುತೂಹಲಕ್ಕೆ ಇಂಬು ಕೊಟ್ಟೆ. 

ನಾನು: ನಿಮ್ ಫೋನ್ ಆಗ್ಲಿಂದ ಬಹಳ ವೈಬ್ರೇಟ್ ಆಗ್ತಿತ್ತು. ಯಾರೋ ಫೋನ್ ಮಾಡ್ತಿದ್ರು ಅನ್ಸುತ್ತೆ. 

ಆಕೆ: ಹು...... 

ಆಕೆ ದಿಗಂರದತ್ತ ಚಿತ್ತ ಮಾಡಿ ಸುಮ್ನಾದ್ಲು, ನಾನೂ ಮರು ಪ್ರಶ್ನಿಸದೆ ಸುಮ್ನಾದೆ. ಒಂದೈದ್ ನಿಮಿಷ ಮೌನ. ನನ್ಗೆ ಜಗತ್ತಲ್ಲಿರೊ ಎಲ್ಲರ ಕಥೆ ತಿಳಿಯೋ ಹುಚ್ಚು ಅದಕ್ಕೆ ನಾನೇ ಮುಂದುವರೆದು. ನನ್ನ ಬ್ಯಾಗಲ್ಲಿರೋ ಬಿಸ್ಕಟ್ ಪಟ್ಣ ಹರಿದು ತಗೋಳಿ ಎನ್ನುವಂತೆ ಕೈ ಮುಂದೆ ಮಾಡಿದೆ.

ಆಕೆ: ಅದರ ಕಡೆ ನೋಡಿ ನಸು ನಕ್ಕೂ,... ಇನ್ನೊಂದು ತುತ್ತು ತಿಂದ್ರು ಹೊಟ್ಟೇಲಿರೊ ವಿಷವೆಲ್ಲ ಆಚೆ ಬರುತ್ತೆ ಬೇಡ ಅಂದ್ಲು.

ನಾನು: (ಕುತೂಹಲಕ್ಕೆ ಉಂಬುಕೊಟ್ಟು) ಯಾಕೆ ಏನ್ ಆಯ್ತು ಅಂದೆ.

ಆಕೆ: ಕೇಳೋಕೆ ಮನಸ್ಸು, ತಾಳ್ಮೆ ಎರಡೂ ಬೇಕು.. ಇದ್ಯಾ?? ಅಂದ್ಲು
ನಾನು ತಲೆಯಾಡಿಸ್ದೇ..
ಆಕೆ: have you loved anyone? ನೀವ್ ಯಾರನ್ನಾದ್ರು ಪ್ರೀತ್ಸಿದ್ದೀರ?
ಆಕೆ ಕೇಳಿದ ಪ್ರಶ್ನೆಗೆ  ಏನ್ ಉತ್ತರ ಕೊಡ್ಲಿ!! ಸ್ವಲ್ಪ ತಡವರೆಸಿ.... ನಾನ್ ಎಲ್ಲರನ್ನ ಪ್ರೀತಿಸ್ತೀನಿ ಅಂದೆ.

ಆಕೆ: ಇಲ್ಲಿ ಬ್ರಿಲಿಯೆನ್ಸಿ ಬೇಡ, ಪ್ರೀತಿ ಮಾಡಿದ್ದೀರ?

ನಾನು: ಇಲ್ಲಾ...!! 

ಆಕೆ: ನಿಜ್ವಾಗ್ಲೂ? (ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ಲು)

ನಾನು: ಹು ಮಾಡಿದ್ದೀನಿ.... ಆದ್ರೆ ಆ ಪ್ರೀತೀನ ಪ್ರೋತ್ಸಾಹಿಸೊ ತಾಕತ್ತು ನನ್ಗಿರ್‍ಲಿಲ್ಲಾ ಅದಕ್ಕೆ ಸಾಯಿಸ್ದೇ...ನನ್ಗೂ ನಿಮ್ಹಾಗೆ ಮನೆಯವರಿಷ್ಟ, ಅವರಿಗೆ ನೋವ್ ಮಾಡಿ ನನ್ನಿಷ್ಟ ನೊಡೋದು ಕಷ್ಟಾ. ಅವರನ್ನ ನಾನು ಬಹಳ ಪ್ರೀತಿಸ್ತೀನಿ ಅವರಿಗೆ  ನೋವು‌ ಕೊಡೋ ಶಕ್ತಿ ನನ್ನಲ್ಲಿಲ್ಲ. 

ಆಕೆ: (ನಸು ನಕ್ಕು ಕೇಳಿದ್ಲು) ನಿಜ್ವಾಗ್ಲು!! ನೀನು ನಿನ್ನನ್ನ ಜಾಸ್ತಿ ಪ್ರೀತಿಸ್ತೀಯೋ ಅಥವಾ ಮನೆಯವರನ್ನೋ??

ನಾನು: ನಾನು ಮನೆಯವರಿಗೋಸ್ಕರವೇ ನನ್ನ ಪ್ರೀತಿ ಬಲಿಕೊಟ್ಟೆ, ಹಾಗಂದ್ಮೇಲೆ ನಾನು ಮನೆಯವರನ್ನೇ ತುಂಬ ಪ್ರೀತಿಸ್ತೀನಿ.

ಆಕೆ: ನಕ್ಳು

ನಾನು: ಯಾಕ್ ನಗ್ತಿದ್ದೀರ?? ನಾನ್ ಹೇಳ್ತಿರೋದು ಸತ್ಯಾ...

ಆಕೆ: ನಾನೆಲ್ ಸುಳ್ಳು ಅಂದೆ? ನೀವ್ ಸತ್ಯಾನ ನಿನ್ನಿಷ್ಟದಂತೆ ಹೇಳ್ತಿದೀರ. 

ನಾನು: ಅಂದ್ರೆ?

ಆಕೆ: ನಿಮಗೆ ಮೊದ್ಲೂ ನೀವಿಷ್ಟಾ, ಆದಾದ ಮೇಲೆ ನಿನ್ನ ಕಂಫರ್ಟ್ ಜ಼ೋನ್ ಇಷ್ಟಾ, ಆಮೇಲೆ ಸಮಾಜ, ಅಪ್ಪ ಅಮ್ಮ, ಆದಾದ್ ಮೇಲೆ ನಿನ್ನ ಪ್ರೀತಿ. ಅಪ್ಪ ಅಮ್ಮ ಒಪ್ಲಿಲ್ಲಾ ಅಂತ ಸುಮ್ನಾದೆ ಅಂದ್ರೆ ನೀನು ನಿನ್ನನ್ನ ಜಾಸ್ತಿ ಪ್ರೀತಿಸ್ತಿಯ ಅಂತ ಅರ್ಥ. ನಿನ್ನ ತಂದೆ ತಾಯಿ ಅಥವಾ ಸಮಾಜ ನಿಮಗೆ ಕೊಟ್ಟಿರೋ ಸ್ಥಾನ ಮಾನ, ಕಂಫರ್ಟ್ ಜ಼ೋನ್ ‌ಮುಖ್ಯ. ಎಲ್ಲವೂ ಸರಿಯಾಗಿ ಮದ್ವೇ ಆದ್ರೆ ಅದು ಒಳ್ಳೇದು ಆದ್ರೇ ಅದೇ ನನ್ನ ಸ್ಥಾನಕ್ಕೆ ಧಕ್ಕೆ ಆಗುತ್ತೆ ಅನ್ನೋದಾದ್ರೆ ಒಂದ್ ನಿಮಿಷ ಯೋಚಿಸ್ತೀವಿ ಅಲ್ವಾ? 

ನಾನು: ಹಾಗಾದ್ರೆ ನೀವು ನಿಮ್ಮನ್ನೇ ಜಾಸ್ತಿ ಪ್ರೀತಿಸ್ತೀರ ಅಂತಾಯ್ತು!! ( sorry ನೀವ್ ಆಗ್ಲೇ ಮೆಸೇಜ್ ಮಾಡಿದ್ದನ್ನ ನಾನ್ ನೋಡ್ದೆ)

ಆಕೆ: ಹು.... ನಂಗ್ ಗೊತ್ತಾಯ್ತು.... ನಾನು ಆತನನ್ನ ಬಹಳ ಪ್ರೀತಿಸ್ತೀನಿ. ಒಂದಿನ ಇಡೀ ಭೂಮಿಯೇ ನಾಶವಾಗಿ ನಾನ್ ಯಾರಾದ್ರು ಒಬ್ಬನ್ನೇ ಆಯ್ಕೆ ಮಾಡ್ಬೇಕು ಅಂದ್ರೆ ನನ್ನ ಆಯ್ಕೆ ಆವ್ನು. ಅವ್ನಿಗೆ ಜಗತ್ತಿನ ಸುಖವೆಲ್ಲ ಸಿಗ್ಬೇಕು ಅನ್ನೊ ಆಸೆ ನನ್ದೂ, ನಾನು ಸತ್ತು ಆತ ಬದುಕ್ತಾನೆ ಅನ್ನೊದಾದ್ರೆ ನಾನು ಸಾಯೋಕು ಸಿದ್ದ, ಅಷ್ಟು ಪ್ರೀತಿಸ್ತೀನಿ ಆವ್ನನ್ನ. ಆದ್ರೂ ನಾನು (ಸಮಾಜದ, ಅಪ್ಪ ಅಮ್ಮ) ಮತ್ತೆ ಅವ್ನು(ನನ್ನ ಪ್ರೀತಿ) ಅಂತ ಬಂದಾಗ ನನ್ಗೇ "ನಾನೇ" ಮುಖ್ಯ.

ನಾನು: ನಿಮ್ಗೇ ಬೇಕಾದ ಕಂಫರ್ಟ್ ಜ಼ೋನ್ ಆತ ಕೊಡ್ತೀನಿ ಅನ್ನೋದಾದ್ರೆ, ನಿಮ್ ಆಯ್ಕೆ ಅವ್ನೇನಾ? 

ಆಕೆ: ಅದಕ್ಕೊಂದು ನಂಬಿಕೆ ಬೇಕು. ಸಮಾಜನ ಮದ್ಯೆಯೂ ನಿನ್ನ ಕೈ ಹಿಡ್ದು ನಡೇತೀನಿ ಅನ್ನೊ ನಂಬಿಕೆ ಆತ ನನ್ನಲ್ಲಿ ಮೂಡಿಸ್ಬೇಕು. ಆ ನಂಬಿಕೆ ಹುಟ್ಸೋ ಧೈರ್ಯ ಗಂಡಿನ ಜವಾಬ್ದಾರಿ, ಆತ ಸಮಾಜದ ಎದ್ರಿಗೆ ನನ್ನ ಕೈ ಹಿಡಿದು, ಆಥವಾ ನನ್ನ ಜೊತೆ ಯಾವತ್ತು ನಡೀಲೇ ಇಲ್ಲಾ, ಯಾವತ್ತು ಆತ ನನ್ನ ಮುಂದೆಯೇ ಹೋದ, ಜೊತೆಯಾಗ್ಲೇ ಇಲ್ಲಾ. ಹೆಣ್ಣಿಗೆ ತನ್ನ ಬಳಗವನ್ನ ತೊರ್‍ಯಕ್ಕೆ ಒಂದು ಅಧಮ್ಯ ಬಲ ಬೇಕು, ಅದಿಲ್ಲದಿದ್ರೆ ಹೀಗೆ.

ನಾನು: ಅವ್ನಿಗೆ ನಿಮ್ಮಲ್ಲೂ ಈ ನಂಬಿಕೆ ಕಾಣದೇ ಹೋಗಿರ್‍ಬೋದು?

ಆಕೆ: ಖಂಡಿತ, ಹಾಗೂ ಆಗಿರ್‍ಬೋದು.ಅದೇನೋ ಹೇಳ್ತಾರಲ್ಲ ಒಬ್ಬ ಹುಡ್ಗಂಗೇ ಹುಡ್ಗೀಲಿ ತನ್ನ ತಾಯಿ ಕಾಣ್ಬೇಕು, ಹುಡ್ಗೀಗೆ ಹುಡ್ಗನಲ್ಲಿ ತನ್ನ ತಂದೆ ಕಾಣ್ಬೇಕು ಅಂತ ಅದು ಹಾಗಲ್ಲ ಇಬ್ಬರಿಗೂ ಮತ್ತೊಬ್ಬರಲ್ಲಿ ತಮ್ಮ ಅವಶ್ಯಕತೆಗಳು ಕಾಣ್ಬೇಕು. ಈಗಿನ ಕಾಲಕ್ಕೆ ಯಾರು ಪ್ರೀತಿ ಮಾಡಲ್ಲ,ಮಾಡಕ್ಕೂ ಆಗಲ್ಲಾ, ಪ್ರೀತಿಯನ್ನ accept ಮಾಡೋಕು ಯಾರು ತಯಾರಿಲ್ಲ. ಹಂಗೇನಾದ್ರು ಯಾರಾದ್ರು ಪ್ರೀತಿ ಮಾಡಿದ್ರೆ ಅದು ಅನುಮಾನಕ್ಕೆ ದಾರಿ ಮಾಡಿತ್ತೆ. ಅದು ಹುಚ್ಚನ ಪಟ್ಟ ಕಟ್ಕೊಳುತ್ತೆ.

ನಾನು: ಮತ್ತೆ ಈಗ...ಮುಂದೆ? ಅವ್ರ ಫೋನ್ ಯಾಕ್ ತಗೋಳ್ಳಿಲ್ಲ ನೀವು?

ಆಕೆ:ಆತ ನನ್ಗೇ ಅಭ್ಯಾಸ ಆಗೋಗಿದಾನೆ, ನನ್ನ ಮನಸ್ಸು ಆತನಲ್ಲಿ ತುಂಬ ಸಂತೋಷ್ವಾಗಿರುತ್ತೆ. ಆ ಅಭ್ಯಾಸ ಸ್ವಲ್ಪ ಕಡ್ಮೇ ಮಾಡ್ಕೊಬೇಕು. ಕ್ರಮೇಣ ಎಲ್ಲ ಮರ್ತೋಗುತ್ತೆ. ಮರವು ದೇವ್ರು ಕೊಟ್ಟಿರೊ ವರ. ಬದುಕಲ್ಲಿ ಎಲ್ಲವು ಅಭ್ಯಾಸ ವಾಗುತ್ತೆ. ಅದು ಇಲ್ಲ ಅಂದ್ರೆ ಅದ್ ಇಲ್ಲ ಅಷ್ಟೇ.... ಅದಿಕ್ಕೇಂತ ಬದ್ಕೊದ್ ನಿಲ್ಸಕ್ ಆಗುತ್ತಾ?

ನಾನು: ಮುಂದೆ..... ಮದ್ವೇ? 

ಆಕೆ: ಆಗೋದು, ಎಲ್ಲರು ಆಗ್ತಾರೆ ನಾನು ಆಗ್ತೀನಿ...... ಒಂದು ಹೊಸ ಅನ್ಕೂಲಕ್ಕೆ ಹೊಂದ್ಕೊಬೇಕಾಗುತ್ತೆ, ಅಲ್ಲಿ "ನಾನು" ಅನ್ನೋದೇ ಮರೆಯಾಗ್ಬೋದು ಗೊತ್ತಿಲ್ಲಾ!! ಸಧ್ಯಕ್ಕೆ ಬದುಕ್ಕಿದ್ದಷ್ಟು ನಿಜಾ...!!!

ಅಷ್ಟರಲ್ಲಿ ಕಂಡಕ್ಟರ್‍... ಯಶ್ವಂತ್ ಪುರ... ಯಾರ್‍ ಇಳ್ಯೋರು... ಬನ್ನಿ... ಅಂತ ಕೂಗಿದ್ರು, ಆಕೆಯ ಸಾನಿಧ್ಯ ಬಿಟ್ಟು ಹೊರಡ್ಲೇಬೇಕಿತ್ತು. ಎದ್ದು ಹೊರಟೆ. ಕೊನೆಗೆ ಆಕೆಯಲ್ಲಿ ನಾ ಕಂಡಿದ್ದು ಅಧಮ್ಯ ಪ್ರೀತಿ, ಸಮಾಜವನ್ನ ಆಕೆ ಕಂಡುಕೊಂಡ ರೀತಿ, ಆಕೆಯ ಕಣ್ಣಿಂದ ಹೊರ ಬಾರದ ನೀರು.

ಆಕೆ ಯಾರೋ ಏನೋ ಕೊನೆಗೆ  ಹೆಸರನ್ನೂ ಕೇಳ್ಳಿಲ್ಲಾ, ಆದ್ರೆ ಆಕೆ ಹೇಳಿದ್ದಷ್ಟು ನಿಜಾವಾಗದಿದ್ರೂ ನನ್ನನ್ನ ಸ್ವಲ್ಪ 
ಯೋಚಿಸುವಂತೆ ಮಾಡಿತ್ತು....



ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ





Comments

Post a Comment

Popular posts from this blog

ಪ್ರತ್ಯಕ್ತೆ...

ಅನುಕೂಲಕ್ಕೊಂದೆರಡು ಪ್ರೀತಿ..!-2

Love at first sight...