ಅನುಕೂಲಕ್ಕೊಂದೆರಡು ಪ್ರೀತಿ..!-2

 ಅನುಕೂಲಕ್ಕೊಂದೆರಡು ಪ್ರೀತಿ..!-2

‘ರೂಂ ಅಲ್ಲಿ ಬರೀ ಒಬ್ಳೇ ಕೂತಿರ್ತೀಯಲ್ಲ ಬೇಜಾರಾಗಲ್ವಾ ನಿಂಗೆ? ಉಳ್ದಿದ್ ದಿನ ಆಫೀಸು ಕೆಲ್ಸ ಅಂತಾಗುತ್ತೆ, ಭಾನುವಾರವಾದ್ರು ಆಚೆ ಓಡಾಡ್ಕೋಂಡು ಬರ್ಬಾರ್ದಾ.. ಅಂದ್ರು ಪಿ.ಜಿ ಆಂಟಿ. 

ಹೋಗು ಅಂದ್ರೆ ಎಲ್ಲಿಗ್ ಹೋಗದು, ನನ್ಗೆ ಈ ಊರು ಹೊಸ್ದು.. ಆಫೀಸಿಗಾದ್ರೆ ಕ್ಯಾಬ್ ಬರುತ್ತೆ, ಇಲ್ಲಿ ನಾನೊಬ್ಳೆ ಹೋಗ್ಬೇಕು. ನಂಗ್ ಒಟ್ಟಿಗೆ ಆಚೆ ಹೋಗೋ ಅಷ್ಟು ಯಾರು ಸ್ನೇಹಿತ್ರು ಆಗಿಲ್ಲ ಇನ್ನು, ಅಂತ ಸಪ್ಪೆ ಮೋರೆ ಮಾಡ್ಕೊಂಡೆ ಅಂದೆ. 

ಆಚೆ ಓಡಾಡಿದ್ರೆ ಸ್ನೇಹಿತ್ರು ಆಗ್ತಾರೆ ನೀನ್ ಕುಡ್ಮಿ ತರ ರೂಂ ಅಲ್ಲೇ ಕೂತ್ರೆ, ಬೆಂಗಳೂರಿಗೆ ಬಂದು ಎರಡ್ ತಿಂಗ್ಳಾಯ್ತು ಈಗ್ಲು ಹೊಸ ಊರೇನೆ ಇದು..? ನಿನ್ ಅಮ್ಮ ಹೇಳದ್ದು ಸರಿ ನೀನ್ ಯಾರ್ ಜೊತೆನು ಹೊಂದಲ್ಲ, ಅಂದ್ರು. 

ಹು.. ಹೇಳ್ತರೆ, ಹೇಳ್ದೆ ಏನ್ ಮಾಡ್ತಾರೆ ಇಷ್ಟು ದಿನ ಓದು ಓದು ಅಂತ, ಬರಿ ನನ್ನ ಪುಸ್ತಕದ ಹುಳು ಮಾಡಿದ್ದು ಅವ್ರೆ. ಈಗ ಇದ್ದಕ್ಕಿದ್ದಂತೆ ಎಲ್ಲರೊಟ್ಟಿಗು ಬೆರಿ ಅಂದ್ರೆ ಹೇಗಾಗುತ್ತೆ! ಅಂತ ಮನಸ್ಸಿನಲ್ಲೇ ಬೈಕೊತಿರ್ಬೇಕಾದ್ರೆ, 

ಸರಿ ಬಾ ತಿಂಡಿ ತಿನ್ನು ಅಂದ್ರು ಆಂಟಿ.

ತಿಂಡಿ ತಿಂದು ಮಲಗಿದವಳಿಗೆ ಸಂಜೆ ನಾಲ್ಕಕ್ಕೆ ಎಚ್ಚರವಾಗಿದ್ದು. ಛೇ ಎಷ್ಟೊತ್ ನಿದ್ದೆ ಮಾಡ್ದೆ ಅಂತ ಎದ್ದು, ಮುಖಕ್ಕೆ ನೀರು ಎಂದೆರಡು ಬೊಗಸೆ ನೀರು ಎರಚಿ ಹೋಗಿ ಆಂಟಿನ ನೋಡಿದ್ರೆ ಅವ್ರು ಮಲ್ಗಿದ್ರು. ಇಡೀ ಪಿ.ಜಿ ಗೆ ನಾನೊಬ್ಳು ಎಲ್ಲರು ಟ್ರಿಪ್ಪು, ಔಟಿಂಗ್, ಪಾರ್ಟಿ ಅಂತ ಹೋಗಿದ್ದಾರೆ ಅಂತ ಮೊಬೈಲ್ ಕೈಗೆತ್ತಿಕೊಂಡ್ಡು ಫೇಸ್‍ಬುಕ್ ತೆಗೆದ್ರೆ ಬರೀ ಕೊರೊನಾ. ಸಾಕಾಗಿದೆ ಈ ಕೊರೊನಾ ನೋಡಿ ನೋಡಿ ಅಂತ ಮೊಬೈಲ್ ಪಕ್ಕಕ್ ಇಟ್ಟು ಹಾಗೆ ಗೋಡೆಗೆ ಒರುಗ್ದೊಳಿಗೆ... ಆಂಟಿ ಹೇಳಿದ್ದು ನಿಜಾ ಎಲ್ಲಾದ್ರು ಆಚೆ ಹೋಗ್ಬೇಕು, ಈಗ್ಲಾದ್ರು ಆರಾಮಾಗಿ ಸ್ವತಂತ್ರವಾಗಿ ತಿರ್ಗಾಡೋದನ್ನ ಅಭ್ಯಾಸ ಮಾಡ್ಕೊಬೇಕು. ಆದ್ರೆ ಎಲ್ಲಿಗ್ ಹೋಗದು ಅಂತ ಯೋಚನೆ ಮಾಡ್ತಾನೆ ಗೂಗಲ್ ಅಲ್ಲಿ ನಿಯರ್ ಬೈ ಮಿ ನೋಡ್ದೆ, ಇಲ್ಲೇ ಎರಡ್ ಕಿ.ಮಿ ದೂರದಲ್ಲಿ ಒಂದ್ ಕಾಫಿ ಶಾಪ್ ಇದೆ, ನಾನ್ ನನ್ನ ಲೈಫಲ್ಲೇ ಒಂದ್ ದಿನಾನು ಹೋಗಿಲ್ಲ, ನಮ್ಮೂರಲ್ಲಿ ಇರ್ಲು ಇಲ್ಲ, ಬರೀ ಟಿ.ವಿ.ಲೇ ನೋಡಿದ್ದು, ಅಲ್ಲೇನೊ ಹತ್ತಾರ್ ತರಹದ್ ಕಾಫಿ ಸಿಗುತ್ತಂತೆ, ಅಲ್ದೆ ಮಧ್ಯಾಹ್ನ ಊಟ ಬೇರೆ ಮಾಡಿಲ್ಲ ಅಲ್ಲೇ ಹೋಗಿ ಏನಾದ್ರು, ತಿಂದು ಕುಡ್ದು ಬರೋಣ ಆಂತ, ಬಟ್ಟೆ ಬದಲಿಸಿ ನಡೆದೆ ಹೊರ್ಟೆ. 

ವಾತಾವರಣ ಬಹಳ ಚನ್ನಾಗಿತ್ತು, ಸಂಜೆ ತಣ್ಣನೆ ಗಾಳಿ, ಮನೆಕಡೆ ಹೊರ್ಟಿರೊ ಹಕ್ಕಿಗಳು, ಅಲ್ಲಲ್ಲೇ ಗುಂಪಾಗಿ ಕೂತು ಮಾತು, ನಗೆಯಲ್ಲಿ ಮುಳುಗಿರೊ ಬೆಂಗಳೂರಿನ ಜನ, ಈ ಊರಲ್ಲಿ ಎಲ್ಲರು, ಎಲ್ಲರಿಗು ಅಪರಿಚಿತರೇ, ನಮ್ಮನ್ ಜನ ನೋಡ್ತಾರೆ ಅಂತ ಯಾರು ಹೆದುರೋದು ಇಲ್ಲ, ಹಾಗೆ ನಮ್ಮನ್ನ ಯಾರು ನೋಡೊದು ಇಲ್ಲ ಅಷ್ಟು ಪುರುಸೊತ್ತು ಯಾರುಗೂ ಇಲ್ಲ. ಇದೊಂತರ ಚಂದವೆ ಅನ್ಕೊತಾನೆ ಕಾಫಿ ಶಪ್ ಒಳಗೆ ನೆಡೆದೆ. 



ಮೊದಲನೇ ಬಾರಿ ಬಂದದ್ದು ಈ ಕಾಫಿ ಶಾಪಿಗೆ ಅಂತ, ಅದು ನಾನ್ ಒಬ್ಳೆ, ಮುಜುಗರವಾದ್ರು ಒಳಗೆ ಹೋದ್ರೆ, ಎಲ್ಲಿ ನೋಡಿದ್ರು ಬರಿ ಜೋಡಿಗಳೇ, ಕೆಲವರು ಸುಮ್ನೆ ಮಾತಾಡ್ತಾ ಕೂತಿದ್ರೆ, ಇನ್ನು ಕೆಲವು ಕಾಲೇಜ್ ಯುವಕರು ಅಸೈನ್‍ಮೆಂಟುಗಳನ್ನು ಅಲ್ಲೇ ಬರೀತಿದ್ರು, ನಾನು ಓ ಇದೊಂತರ ತಿಂದು-ಕುಡ್ದು, ಓದಿ-ಬರ್ದು ಎಲ್ಲಾ ಮಾಡ್ಬೊದಂತ ಜಾಗ ಅನ್ಕೊಂಡ್ತ ಒಂದು ಮೂಲೆಯಲ್ಲಿ ಹೋಗಿ ಕೂತು ಮೊದಲೇ ಮೇಜಿನ ಮೇಲಿದ್ದ ಮೆನು ತೆಗೆದು ನೋಡಿದ್ರೆ ಹತ್ತಾರು ಬಗೆಯ ಕಾಫಿ ಮತ್ತು ಲ್ಯಾಟೆಗಳು. ಯಾವುದನ್ನ ತಗೊಳೊದು ಅಂತ ಯೋಚಿಸ್ತಿರ್ಬೆಕಾದ್ರೆ, ನನ್ ಮುಂದೆ ಒಂದು ಹುಡ್ಗಿ ತನ್ ಮೊಬೈಲನ್ನ ಟೇಬಲ್ ಮೇಲೆ ಬಡಿದು, ಎದುರು ಬಂದು ಕೂತೆ ಬಿಟ್ಲು!! ಅಯ್ಯೊ ಇದ್ ಯಾರ್ ಹೀಗ್ ಬಂದು ಎದುರು ಕೂತ್ಲಲ್ಲ, ಬೇರೆ ಕಡೆ ಎದ್ದೊಗ್ಬೇಕು ಅನ್ಬೇಕು ಅನ್ಸುದ್ರು ಯಾಕೊ ಹೇಳ್ಳಿಲ್ಲ, ಅವ್ಳನ್ನ ನೋಡಿದ್ರೆ ಯಾಕೊ ಬಾಯಿಂದ ಮಾತೆ ಬರ್ಲಿಲ್ಲ, ಅವ್ಳ ಕಣ್ಣು ಯಾರೊದ್ದೊ ಬರುವಿಕೆಗೆ, ಕಿವಿ ಯಾರದ್ದೊ ಮಾತಿಗೆ, ಮನಸ್ಸು ಯಾರದ್ದೋ ಸಾನಿಧ್ಯಕ್ಕೆ ಹಾತೊರಿತಿದೆ ಅನ್ನಿಸ್ತಿತ್ತು.



ಅಷ್ಟರಲ್ಲಿ ವೇಟರ್ ಬಂದು “ಏನ್ ಬೇಕು” ಅನ್ನೋ ಮುಖ ಭಾವದಲ್ಲಿ ಬಂದು ಎದುರು ನಿಂತ. ನಾನು ಒಂದು ಕ್ಯಾಪೇಚೀನೊ ಹೇಳಿ ಮತ್ತೆ ಅವಳ ಕಡೆ ನೋಡ್ತ ಕುಳಿತೆ. ಸಾಮಾನ್ಯವಾಗಿ ಯಾರಾದ್ರು ನಮ್ ಮುಂದೆ ಕೂತು ನಮ್ಮನ್ನೆ ನೋಡಿದ್ರೆ ನಮ್ಗೆ ಅದರ ಅರಿವಾಗತ್ತೆ, ಆದ್ರೆ ಆ ಪುಣ್ಯಾತ್ಗಿತ್ತಿಗೆ ಅದರ ಪರಿವೆ ಇರ್ಲಿಲ್ಲಾ, ಅವಳ ಗಮನ ಬೇರೆಲ್ಲೋ ನೆಟ್ಟಿತ್ತು. ಅವಳಲ್ಲಿ ಏನೋ ಒಂದು ಏಕತಾನತೆ. 

ನಾನು ಕಾಫಿ ಮರ್ತು ಅವಳನ್ನೇ ನೋಡ್ತಾ ಕೂತಿದ್ದೆ, ನನ್ನ ಗಮನ ಸಡಿಲಮಾಡಲು ಅವಳ ಫೋನಿಗೋಂದು ಮೇಸೇಜ್ ಬಂತು, ಬೇರೆಯವರ ಮೋಬೈಲ್ ಸ್ಕ್ರೀನ್ ನೋಡ್ಬಾರ್ದು ಅನ್ನೊ ಸಾಮಾನ್ಯ ಪ್ರಜ್ಞೆಯನ್ನು ಅವಳು ತಳವಳಿಸುತ್ತಿದ್ದ ಭಾವ ಮರೆ ಮಾಡ್ಸಿ ನಾನ್ ಅದನ್ನ ಓದ್ದೆ. ಅದ್ರಲ್ಲಿ “ಪ್ಲೀಸ್ ಸ್ಟೇ ಔಟ್” ಅನ್ನೊ ಮೆಸೇಜ್ ಕಾರ್ತಿಕ್ ಅನ್ನೊನಿಂದ ಬಂದಿತ್ತು. 

ಇಂತ ಚೆಂದದ ಹುಡ್ಗಿಗೆ ಯಾರಾದ್ರು ಯಾಕ್ ಹೀಗ್ ಮೆಸೇಜ್ ಮಾಡ್ತಾರೆ..!!! ಆ ಮೆಸೇಜ್ ನೋಡಿದ್ ಕೂಡ್ಲೆ, ಆಕೆ ಕಣ್ಣು ಒದ್ದೆಯಾದ್ವು. ಆದ್ರೆ ಅವ್ಳು ಅದನ್ನ ಒರೆಸಲಿಲ್ಲ. ಆ ಕೆನ್ನೆಗೆ ಎಷ್ಟೊ ದಿನಗಳಿಂದ ಕಣ್ಣೀರ ತೇವದ ಅಭ್ಯಾಸವಾಗಿ ಅದು ಸ್ಪಂದನೆ ನಿಲ್ಸಿತ್ತು ಅನ್ನೊದು ಗೊತ್ತಾಗ್ತಿತ್ತು. 

ಅಷ್ಟರಲ್ಲಿ ಮತ್ತೆ ಅದೇ ವೇಯ್ಟರ್ ಬಂದು ಅದೇ ಮುಖ ಭಾವದಲ್ಲಿ ಅವಳ ಮುಂದೆಯು ನಿಂತ, ಆಕೆ ತಲೆ ಎತ್ತದೆ “ಒನ್ ಕಾಫಿ ಪ್ಲೇಜ್, ಹಾಗೆ ಅವರದ್ದು ಬಿಸಿ ಮಾಡಿ ತನ್ನಿ”  ಅನ್ನುತ್ತ ನನ್ನನ್ನೆ ದಿಟ್ಟಿಸಿದ್ಲು, 

ನನಗ್ಯಾಕೊ ಮುಜುಗರವೇ ಆಗ್ಲಿಲ್ಲ, “ಏನಾಯ್ತು” ಅಂತ ಕೇಳೇಬಿಟ್ಟೆ? ಅಲ್ಲಿಗೆ ಆಕೆಗೆ ನಾನು ಆಗ್ಲಿಂದ ಗಮನಿಸಿದ್ದು ಗೊತ್ತಿದೆ!!



ಅವ್ಳು ತುಸು ಮುಗುಳ್ನಕ್ಕು “ನಾಳೆ ನಾನ್ ಪ್ರೀತ್ಸಿದ್ ಹುಡ್ಗನ್ ಎಂಗೇಜ್‍ಮೆಂಟು” ಅಂದ್ಲು.

ಓ... ಇದು ಸಾಮಾನ್ಯ ಲವ್ ಕೇಸು ಅನ್ಕೊಂಡು ಸುಮ್ನಾದೆ. 

ಮುಂದೆ ಅವ್ಳೆ ಪಾಪ ಅವ್ನಿಗೆ ಅಮ್ಮನ್ ಒತ್ತಾಯ, ಇನ್ನೇನ್ ಮಾಡ್ತಾನೆ ಒಪ್ಕೊಂಡಿದಾನೆ. ಅಂದ್ಲು.

ನಿಮ್ಗೆ ಆ ಹುಡ್ಗ ಮೇಸೇಜ್ ಮಾಡೊದ್ ನೋಡಿದ್ರೆ ನಂಗ್ ಯಾಕೊ ಇದು ಒತ್ತಾಯಕ್ ನೆಡಿತಿರೊ ಮದ್ವೆ ಅನ್ಸಲ್ಲ ಅಂದೆ.

ಅವ್ಳಿಗೆ ಆ ಮೇಸೇಜ್ ಕೂಡ ನನ್ ಕಣ್ಣಿಗೆ ಬಿದ್ದಿದೆ ಅನ್ನೊ ಅರಿವಾಗಿ, ಇನ್ನೇನ್ ಮಾಡ್ತಾನೆ ಅವ್ನಿಗೆ ನಾನ್ ಸರಿಯಾದ್ ಜೊತೆ ಇಲ್ಲ ಅನ್ಸಿದೆ ಅನ್ಸುತ್ತೆ, ನನ್ಗಿಂತ ಒಪ್ಪೊ ಹುಡ್ಗಿನೆ ತೋರ್ಸಿದ್ದಾರೆ ಅವ್ರಮ್ಮ ಅದಕ್ಕೆ ಒಪ್ಪಿದ್ದಾನೆ ಅನ್ನೊವಾಗ ಅವಳ ಕಣ್ಣಲ್ಲೊಂದು ಹೆಪ್ಪುಗಟ್ಟಿದ ದು:ಖವಿತ್ತು.

ನಿಮ್ಗೆ ಕಾಗ್ನಿಟೀವ್ ಡಿಸ್ಸೊನೆನ್ಸ್ (ಅರಿವಿನ ಅಪಶ್ರುತಿ) ಅಂತ ಒಂದ್ ವಿಚಾರ ಇದೆ ಗೊತ್ತಾ? ಅಂದೆ, ಆಕೆ ಗೊತ್ತಿಲ್ಲ ಎಂಬಂತೆ ನನ್ನ ದಿಟ್ಟಿಸಿದ್ಲು. ನಿಮ್ಗೆ ಗೊತ್ತು ಆತ ನಿಮ್ಗೆ ಮೊಸ ಮಾಡ್ತಿದ್ದಾನೆ, ನಿಮ್ಗೆ ಆತನಿಗಿಂತ ಒಳ್ಳೆ ಹುಡ್ಗ ಸಿಗ್ತಾನೆ ಅನ್ನೊದು, ಇದು ಸತ್ಯ,

ಆದರೆ ನಿಮ್ ನಂಬಿಕೆ ಆತ ಅಸಹಾಯಕ ಅಂತ ಹೇಳ್ತಿದೆ ಅಲ್ವಾ... ಸತ್ಯನ ನಂಬಬೇಕೊ ಅಥವಾ ನಂಬಿಕೆನ ನಂಬಬೇಕೊ ಗೊತ್ತಾಗ್ದೆ, ಯಾವುದು ನಿಮ್ಗೆ ಬಹಳ ಹರ್ಟ್ ಮಾಡುತ್ತೊ, ಅವ್ನನ್ನ ಮರ್ಯೋದಕ್ಕೆ ಅದನ್ನ ಆಯ್ಕೆ ಮಾಡ್ತಿದ್ದೀರಿ ಅಲ್ವಾ ?? ಪ್ರಶ್ನಿಸ್ದೆ...

ಅವ್ಳು ಇದನ್ನ ನನ್ನಿಂದ ಊಹಿಸಿರ್ಲಿಲ್ಲ... ತಲ್ಲಣಿಸಿ ಹೋದ್ಲು... 

ಆತ ನಿಮ್ಗೆ ಮೋಸ ಮಾಡ್ತಿದ್ದಾನೆ ಅನ್ನೊದು ನೀವ್ ನಂಬಿ ಬಿಡಿ... ಸತ್ಯ, ಅದನ್ನ ಒಪ್ಕೊಂಡು ಮುಂದೆ ಹೋಗಿ ಅಂದೆ.

ನಿನ್ಗೆ ಆತನ ಬಗ್ಗೆ ಏನು ಗೊತ್ತಿಲ್ಲ, ಸುಮ್ನೆ ಮಾತಾಡ್ತಿದ್ದೀಯ...!! ನೀನ್ ಯಾರ್ ಇದ್ರು ಬಗ್ಗೆ ಮಾತಾಡೋಕೆ?? 

ಹೌದು, ನಾನ್ ಯಾರೂ ಅಲ್ಲ, ನಂಗ್ ಇದ್ರಿಂದ ಏನು ಆಗ್ಬೇಕಾಗೂ ಇಲ್ಲ..!!! ನಿಜಾ... ಸರಿ ಬರ್ತಿನಿ ನಾನು...

ಯಾಕೊ ಎದ್ ಹೋಗ್ಬೇಕು ಅನ್ನಿಸ್ತಿದೆ. ಹಾ.... ಹೋಗೋಕು ಮುಂಚೆ ಒಂದ್ ಮಾತು... ನನ್ನಂತ ಅಪರಿಚಿತರಿಗೆ ನೀವ್ ಅದ್ಭುತವಾಗ್ ಕಾಣ್ತಿರ...!!! ಎಂದು ತಿರುಗಿ ನೋಡದಂತೆ ನಡೆದೆ. 

ಮೊದಲ ಬಾರಿ ಕಾಫಿಶಾಪಿನಲ್ಲಿ ಆರ್ಡರ್ ಮಾಡಿದ ಕಾಫಿ ರುಚಿ ಕಳೆದು, ಕುಡಿಯಲು ಯಾರು ಇಲ್ಲದಂತೆ ಆರಿ ಹೋಗಿತ್ತು.  



 




       


Comments

Post a Comment

Popular posts from this blog

ಪ್ರತ್ಯಕ್ತೆ...

Love at first sight...